ಆಂಫಿಕ್ಟಿಯೋನಿ

ಪ್ರಾಚೀನ ಗ್ರೀಸಿನಲ್ಲಿ ನಗರರಾಜ್ಯಗಳಿದ್ದ ಕಾಲದಲ್ಲಿ ಪ್ರಮುಖ ದೇವಸ್ಥಾನಗಳ ಸಂರಕ್ಷಣೆಗೋಸ್ಕರ, ಒಂದೊಂದು ಮುಖ್ಯ ದೇವಮಂದಿರದ ಸುತ್ತ ಇದ್ದ ರಾಜ್ಯಗಳು ಸೇರಿ ಏರ್ಪಡಿಸಿಕೊಂಡಿದ್ದ ಒಕ್ಕೂಟಗಳಿಗೆ ಈ ಹೆಸರಿದೆ. ಇವುಗಳ ಪೈಕಿ ಡೆಲ್ಫಿಯಲ್ಲಿದ್ದ ಅಪೊಲೋ ದೇವಮಂದಿರದ ಪೋಷಣೆಗಾಗಿ ಮಾಡಿಕೊಂಡಿದ್ದ ಒಕ್ಕೂಟ ಪ್ರಸಿದ್ಧವಾಗಿತ್ತು. ದೇವಸ್ಥಾನದ ಆಡಳಿತ, ಬಂದುಹೋಗುವ ಭಕ್ತಾದಿಗಳ ಯೋಗಕ್ಷೇಮ, ಜಾತ್ರೆ ಕಾಲದಲ್ಲಿ ಶಾಂತಿ ರಕ್ಷಣೆ, ಸುತ್ತಮುತ್ತಲಿನ ರಸ್ತೆಗಳ ದುರಸ್ತು ಮುಂತಾದ ಅನೇಕ ಕೆಲಸಗಳನ್ನು ಒಕ್ಕೂಟ ನೋಡಿಕೊಳ್ಳುತ್ತಿತ್ತು. ಕಾಲಕ್ರಮೇಣ ಒಕ್ಕೂಟದ ಸದಸ್ಯ ರಾಜ್ಯಗಳಲ್ಲಿ ರಾಜಕೀಯ ಮೈತ್ರಿ ಬೆಳೆಯಿತು. ಕೇವಲ ನಗರ ರಾಜ್ಯಗಳೇ ಇದ್ದ ಆ ಕಾಲದಲ್ಲಿ ಗ್ರೀಕರೆಲ್ಲ ಒಂದು ಎಂಬ ಭಾವನೆ ಬೆಳೆದು ರಾಷ್ಟ್ರೀಯ ಐಕ್ಯ ಏರ್ಪಡಲು ಅವರ ಭಾಷೆ, ಲಿಪಿಗಳ ಏಕತೆಯೊಂದಿಗೆ ಹೋಮರನಂಥ ಕವಿಗಳ ಕೃತಿಗಳು ಸಹಾಯ ಮಾಡಿದುವಲ್ಲದೆ ಇಂಥ ನೆರೆರಾಜ್ಯಗಳ ಒಕ್ಕೂಟಗಳೂ ನೆರವಾದುವು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ